ಪ್ರಧಾನ ಮಂತ್ರಿ ಸೂರ್ಯಫರ್ ಉಚಿತ ವಿದ್ಯುತ್ ಯೋಜನೆಯು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ : ಹೆಚ್.ಆರ್.ವೀರೇಂದ್ರ.
ಹದ್ದಿನಕಣ್ಣು ಡಿಜಿಟಲ್ ಮೀಡಿಯಾ 15-10-2026
ಭದ್ರಾವತಿ : ಪ್ರಧಾನ ಮಂತ್ರಿ ಸೂರ್ಯ ಫರ್ ಸೇವಾ ಸೇತು ಯೋಜನೆಯನ್ನು ಪರಿಣಾಮಕಾರಿಯಾಗಿ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮೆಸ್ಕಾಂ ಅನುಷ್ಠಾನಗೊಳಿಸಲು ಮುಂದಾಗಿದೆ ಎಂಬುದಾಗಿ ಮೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಆರ್.ವೀರೇಂದ್ರ ತಿಳಿಸಿದರು.
ಅ. 15 ರ ಗುರುವಾರ ನಗರದ ಉಂಬ್ಳೆಬೈಲ್ ರಸ್ತೆಯ ಮೆಸ್ಕಾಂ ನಗರ ಉಪ ವಿಭಾಗ ಮತ್ತು ಗ್ರಾಮಾಂತರ ಉಪವಿಭಾಗ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸೇವಾ ಸೇತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿ ಸೂರ್ಯಫರ್ ಸೇವಾ ಸೇತು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸ ಲಾಗಿದ್ದು, ಈ ಯೋಜನೆಯಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಇದಕ್ಕೆ ಪೂರಕವಾಗಿ ವಿವಿಧ ಸೋಲಾರ್ ಕಂಪನಿಗಳ ಅಧಿಕೃತ ಮಾರಾಟಗಾರರೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಸೋಲಾರ್ ಅಳವಡಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಲಿದ್ದು, ಅಲ್ಲದೆ ಗ್ರಾಹಕರಿಗೆ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಸಹ ಕಲ್ಪಿಸಲಿದ್ದಾರೆ. ಸೋಲಾರ್ ಅಳವಡಿಕೆಯಿಂದ ಮೆಸ್ಕಾಂಗೆ ವಿದ್ಯುತ್ ಉಳಿತಾಯ ವಾಗಲಿದ್ದು, ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ವಾಗಲಿದೆ. 20 ವರ್ಷಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆದು ಕೊಳ್ಳಬಹುದಾಗಿದೆ ಎಂದರು.
ನಗರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬೀರಪ್ಪ, ಗ್ರಾಮಾಂತರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅಬ್ದುಲ್ ಮುನಾಫ್ ಮತ್ತು ವಿಭಾಗೀಯ ಕಛೇರಿ ಲೆಕ್ಕಾಧಿಕಾರಿ ಅಶ್ವಿನ್ ಕುಮಾರ್ ಹಾಗು ಮೆಸ್ಕಾಂನ ವಿವಿಧ ಘಟಕಗಳ ಅಧಿಕಾರಿಗಳು ,ಮೆಸ್ಕಾಂ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಗ್ರಾಹಕರು ಹಾಗೂ ಇತರರು ಉಪಸ್ಥಿತರಿದ್ದರು.
ಬ್ಯೂರೋ ವರದಿ